ದಾತಾರ್, ಬಳವಂತ ನಾಗೇಶರಾವ್
 	1894-1963. ನ್ಯಾಯವಾದಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ. 1894ರ ಆಗಸ್ಟ್ 13ರಂದು ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿರುವ ಸಾಂಗಲಿ ಜಿಲ್ಲೆಯ ತಾಸ್‍ಗಾಂವ್ ತಾಲ್ಲೂಕಿನಲ್ಲಿ ಜನಿಸಿದರು. ಅವರ ತಂದೆ ಪ್ರಾರಂಭದಲ್ಲಿ ಸ್ವಲ್ಪ ಕಾಲ ಸಾಂಗೋಲಾದಲ್ಲಿ ಖಾಸಗಿ ಸೇವೆಯಲ್ಲಿದ್ದು ಅನಂತರ ತಾಸ್‍ಗಾಂವ್, ಸಾಂಗಲಿ, ಬೆಳಗಾಂವಿ, ಹುಬ್ಬಳ್ಳಿ, ಧಾರವಾಡ ಮತ್ತು ಗದಗ ಪೌರಸಭೆಗಳ ಕಾರ್ಯದರ್ಶಿಗಳಾಗಿದ್ದರು.

	ಬಳವಂತ ನಾಗೇಶರಾವ್ ದಾತಾರರ ಪ್ರಾಥಮಿಕ ಶಿಕ್ಷಣ ಪಂಢರಪುರದ ಮರಾಠಿ ಶಾಲೆಯಲ್ಲಾಯಿತು. ಅವರು ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಕಲಿತದ್ದು ವಕೀಲಿಯನ್ನು ಪ್ರಾರಂಭಿಸಿದ ಅನಂತರ. 1913ರಲ್ಲಿ ಪುಣೆಯಲ್ಲಿಯ ಮರಾಠಿ ವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪುಣೆಯ ಡೆಕ್ಕನ್ ಕಾಲೇಜು ಮತ್ತು ಬಡೋದೆಯ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ 1917ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. ಪರೀಕ್ಷೆಯಲ್ಲಿ ಸಂಸ್ಕøತ ಆನರ್ಸ್ ತೆಗೆದುಕೊಂಡು ಮೊದಲನೆಯ ವರ್ಗದಲ್ಲಿ ತೇರ್ಗಡೆ ಹೊಂದಿದರು. ಎರಡು ವರ್ಷಗಳ ಅನಂತರ ಎಂ.ಎ. ಪದವಿ ಗಳಿಸಿದರು. ವೇದಾಂತ ಮತ್ತು ತತ್ತ್ವಶಾಸ್ತ್ರದಲ್ಲಿ ಅವರಿಗೆ ಝಾಲಾ ವೇದಾಂತ ಪಾರಿತೋಷಿಕ ದೊರಕಿತು. ಅವರು 1920ರಲ್ಲಿ ಧಾರವಾಡದ ಕಾಲೇಜಿನಲ್ಲಿ ಸಂಸ್ಕøತ ಇಂಗ್ಲಿಷ್ ಭಾಷೆಗಳ ಪ್ರಾಧ್ಯಾಪಕರಾದರು. 1923ರಲ್ಲಿ ಅವರು ಮುಂಬೈ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಕೀಲ ವೃತ್ತಿ ಹಿಡಿದು ಪ್ರಮುಖ ನ್ಯಾಯವಾದಿಗಳೆನಿಸಿಕೊಂಡರು. ಅವರು ಬೆಳಗಾಂವಿಯ ರಾಜಾ ಲಖಮನ ಗೌಡ ನ್ಯಾಯಶಾಸ್ತ್ರ ಕಾಲೇಜಿನ ಸ್ಥಾಪಕರಲ್ಲೊಬ್ಬರು. 1939ರಿಂದ 1952ರ ವರೆಗೆ ಅವರು ಆ ಕಾಲೇಜಿನಲ್ಲಿ ನ್ಯಾಯಶಾಸ್ತ್ರ ಅಧ್ಯಾಪಕರಾಗಿದ್ದರು.

	ದಾತಾರರು 1920ರಿಂದಲೇ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಅವರು ಅನೇಕ ಸಲ ಕಾರಾವಾಸ ಮತ್ತು ಜುಲ್ಮಾನೆ ಶಿಕ್ಷೆ ಅನುಭವಿಸಿದರು. ಅವರು ಕಾಂಗ್ರೆಸಿನ ಕರ್ನಾಟಕ ಪ್ರಾಂತೀಯ ಮತ್ತು ಅಖಿಲ ಭಾರತ ಸಮಿತಿಗಳ ಸದಸ್ಯರಾಗಿದ್ದರು. 1952, 1957 ಮತ್ತು 1962ರ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕ ಸಭೆಗೆ ಚುನಾಯಿತರಾದರು. 1952-1955ರಲ್ಲಿ ಕೇಂದ್ರ ಸರ್ಕಾರದಲ್ಲಿ ಗೃಹ ವ್ಯವಹಾರಗಳ ಉಪಸಚಿವರೂ 1956ರಿಂದ ರಾಜ್ಯಸಚಿವರೂ ಆಗಿದ್ದರು. ಅವರ ಹಿಮಾಲಯನ್ ಪಿಲ್ಗ್ರಿಮೇಜ್ ಎಂಬ ಕೃತಿಯನ್ನು ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಟನ ವಿಭಾಗ 1961ರಲ್ಲಿ ಪ್ರಕಟಿಸಿತು. 1963ರ ಫೆಬ್ರವರಿಯಲ್ಲಿ ಅವರು ತೀರಿಕೊಂಡರು.

	ದಾತಾರರು ಕರ್ನಾಟಕ ಏಕೀಕರಣ ಚಳವಳಿಯ ಮುಖಂಡರಲ್ಲೊಬ್ಬರಾಗಿದ್ದರು. ಅವರಿಗೆ ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯವಿತ್ತು. ಅವರು ಅಖಿಲ ಭಾರತ ಸಂಸ್ಕøತ ಸಮ್ಮೇಳನದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. 
										(ಜಿ.ಕೆಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ